ರಾಹುಲ್‍ಗೆ  ಗಾಳ ಹಾಕಿದ ಲಕ್ನೋ ಫ್ರಾಂಚೈಸಿ


ರಾಹುಲ್‍ಗೆ  ಗಾಳ ಹಾಕಿದ ಲಕ್ನೋ ಫ್ರಾಂಚೈಸಿ

ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಯುತ್ತಿದೆ. ಇನ್ನೂ ಮುಂದಿನ ತಿಂಗಳು ಮೆಗಾ ಹರಾಜು ನಡೆಯಲಿದ್ದು, ಆಟಗಾರರ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತೊಡಗಿದ್ದು, ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಫ್ರಾಂಚೈಸಿ ತೊರೆಯುವುದು ಬಹುತೇಕ ಖಚಿತವಾಗಿದೆ.

ಪಂಜಾಬ್ ತಂಡ ಬಿಟ್ಟು ಬೇರೆ ತಂಡದ ಹುಡುಕಾಟದಲ್ಲಿದ್ದ ಕೆಎಲ್ ರಾಹುಲ್‍ಗೆ ಲಕ್ನೋ ಫ್ರಾಂಚೈಸಿ ಗಾಳ ಹಾಕಿದೆ ಎಂದು ಹೇಳಲಾಗಿದೆ. ಮುಂದಿನ ಆವೃತ್ತಿಯ ಎರಡು ಹೊಸ ತಂಡಗಳಲ್ಲಿ ಒಂದಾದ ಲಕ್ನೋ ಫ್ರಾಂಚೈಸಿಯನ್ನು ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್ ಖರೀದಿಸಿತ್ತು. ಸದ್ಯದ ವರದಿಯ ಪ್ರಕಾರ ಲಕ್ನೋ ಫ್ರಾಂಚೈಸಿ ರಾಹುಲ್ ಜೊತೆ ಮೂರು ವರ್ಷಗಳ ಒಪ್ಪಂದ ಬೇಡಿಕೆ ಇಟ್ಟಿದ್ದು, ರಾಹುಲ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವಆಟಗಾರರ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಹೊಸ ತಂಡಗಳು ಈ ಆಟಗಾರರನ್ನು ಸಹಿ ಮಾಡಬಹುದು ಮತ್ತು ಅನಾವರಣಗೊಳಿಸಬಹುದು. ಹಳೆಯ ಫ್ರಾಂಚೈಸಿಯಿಂದ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಅಂತಿಮಗೊಳಿಸಲು ನವೆಂಬರ್ 30ರ ಗಡುವು ನೀಡಲಾಗಿದ್ದು, ಹೊಸ ಫ್ರಾಂಚಸಿಗಳಿಗಾಗಿ ಬಿಸಿಸಿಐ ಬಿಡುಗಡೆ ಮಾಡಿದ ಮಾನದಂಡಗಳ ಪ್ರಕಾರ, ಮೆಗಾ ಹರಾಜಿಗಿಂತ ಮೊದಲು ಮೂರು ಆಟಗಾರರನ್ನು ಸಹಿ ಮಾಡಲು ಹೊಸ ಐಪಿಎಲ್ ತಂಡಗಳಿಗೆ ಅನುಮತಿಸಲಾಗುತ್ತದೆ.