ಮುರಳಿ ಅಭಿಮಾನಿಗಳಿಂದ ತಯಾರಿ ಜೋರು.!


ಮುರಳಿ ಅಭಿಮಾನಿಗಳಿಂದ ತಯಾರಿ ಜೋರು.!

ಶ್ರೀ ಮುರಳಿ ನಟನೆಯ ಮದಗಜ ಚಿತ್ರ ಡಿಸೆಂಬರ್ 03ರಂದು ಬಿಡುಗಡೆಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಚಿತ್ರ ಸೆನ್ಸಾರ್ ಆಗಿದ್ದು, ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ದೊಡ್ಡ ಗ್ಯಾಪ್‍ನ ನಂತರ ಮುರಳಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಆ ದಿನವನ್ನು ಅದ್ಧೂರಿಯಾಗಿ ಸಂಭ್ರಮಿಸಲು ಮುರಳಿ ಅಭಿಮಾನಿ ಸಂಘವಾದ ಮುರಳಿ ಬ್ರಿಗೇಡ್ ತೀರ್ಮಾನಿಸಿದೆ.

 

ಚಿತ್ರ ಕೆ.ಜಿ.ರಸ್ತೆಯ ಅನುಪಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಅಂದು ನಟ ಮುರಳಿಗೆ ಬೃಹತ್ ಸೇಬಿನ ಹಾಕಿ ಅಭಿಮಾನಿಗಳು ಸ್ವಾಗತಿಸಲಿದ್ದಾರೆ. ಜೊತೆಗೆ ಮದಗಜ ಮುರಳಿ ನಟನೆಯ 22ನೇ ಸಿನಿಮಾವಾಗಿದ್ದು, ಅಂದು 22 ಕೆಜಿ ತೂಕದ ಕೇಕ್ ಕತ್ತರಿಸಲಿದ್ದಾರೆ. ಹಾಗೂ ಅಭಿಮಾನಿಗಳ ಸಂಭ್ರಮ ಇಷ್ಟಕ್ಕೆ ನಿಲ್ಲುವುದಿಲ್ಲ. 72 ಅಡಿಯ ಎರಡು ಕಟೌಟ್‍ಗಳನ್ನು ನಿಲ್ಲಿಸಿ, ಮುರಳಿಯವರಿಗೆ ಬೆಳ್ಳಿ ಕಿರೀಟ ಹಾಗೂ ಬೆಳ್ಳಿ ಗದೆ ನೀಡಿ ಸನ್ಮಾನಿಸಲು ಅಭಿಮಾನಿಗಳು ತಯಾರಿ ನಡೆಸಿದ್ದು, ಜೊತೆಗೆ ಅಂದು ಚಿತ್ರಮಂದಿರದ ಬಳಿ ಪ್ರೇಕ್ಷಕರಿಗೆ ತಿಂಡಿ, ಊಟವನ್ನೂ ಹಂಚಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಹಾಗೇಯೆ ಚಿತ್ರ ಕರ್ನಾಟಕದಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲೂ ತಯಾರಾಗಿದೆ. ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದು, ಉಮಾಪತಿ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಆಶಿಕಾ ರಂಗನಾಥ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.