ಇಂತಹ ಕೀಳುಮಟ್ಟದ ರಾಜಕಾರಣ ಮಾಡಿಲ್ಲ


ಇಂತಹ ಕೀಳುಮಟ್ಟದ ರಾಜಕಾರಣ ಮಾಡಿಲ್ಲ

ಬೆಂಗಳೂರು: ಮಾನ ಮಾರ್ಯಾದೆ ಇಲ್ಲದ ಬಿಜೆಪಿಗೆ ಸುಳ್ಳು ಹೇಳುವುದೇ ಒಂದು ಕಾಯಕವಾಗಿದೆ. ಭಗವಂತ ಖೂಬಾ ತವರೂರಾದ ಔರಾದ್‍ನಲ್ಲಿಯೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅದನ್ನೇ ಸರಿಪಡಿಸಲು ನಿಮ್ಮ ಕೈಯಲ್ಲಿ ಆಗುತ್ತಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡೋದು ಬಿಟ್ಟು ಸುಳ್ಳು ಹೇಳೋದನ್ನೇ ನಿಮ್ಮ ಕಾಯಕ ಮಾಡಿಕೊಂಡಿದ್ದೀರಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ರು.

ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸಚಿವ ಭಗವಂತ ಖೂಬಾ, ಈಶ್ವರ ಖಂಡ್ರೆ ಪಾಟೀಲ್? ಪರಿವಾರ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಸುಳ್ಳು ಹೇಳುವುದು ನನ್ನ ರಕ್ತದಲ್ಲಿಯೇ ಇಲ್ಲ. ಅದು ಮುಂದೆ ಬರೋದು ಇಲ್ಲ. ಖೂಬಾ ನೀಡಿರುವ ಹೇಳಿಕೆಯು ಸಂಪೂರ್ಣ ಸುಳ್ಳಾಗಿದೆ. ಈ ರೀತಿಯ ಕೆಲಸವನ್ನು ಖೂಬಾ ಮೊದಲು ಬಿಡಬೇಕು.

ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆಗೆ ಟಿಕೆಟ್ ಸಿಗುತ್ತಿದ್ದಂತೆಯೇ ನಾನು ಕರೆ ಮಾಡಿ ಪ್ರಕಾಶ್‍ರನ್ನು ಅಭಿನಂದಿಸಿದ್ದೇನೆ ಎಂದು ಖೂಬಾ ಹೇಳಿದ್ದಾರೆ. ಇದು ಕೂಡಾ ಖೂಬಾ ಹೇಳಿದ ಮತ್ತೊಂದು ಸುಳ್ಳಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಕುಟುಂಬಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಖುದ್ದು ಖೂಬಾನೇ ಈ ಪರಿವಾರ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನೆಂದೂ ಇಂತಹ ಕೀಳುಮಟ್ಟದ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ರು.

ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಖಂಡ್ರೆ, ಬಿಜೆಪಿ ಅದೆಷ್ಟೇ ಹಣದ ಹೊಳೆ ಹರಿಸಿದರೂ ಸಹ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 1500 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.