ಮೋದಿ ಗಮನಕ್ಕೆ `ಹಿಜಾಬ್ ‘ವಿವಾದ ಬಂದಿಲ್ಲವೇ?


ಮೋದಿ ಗಮನಕ್ಕೆ `ಹಿಜಾಬ್ ‘ವಿವಾದ ಬಂದಿಲ್ಲವೇ?

ಬೆಂಗಳೂರು : ಬಿಜೆಪಿ ಮತ್ತು ಸಂಘ ಪರಿವಾರ ಬಹಳ ವ್ಯವಸ್ಥಿತವಾಗಿ ಹಿಜಾಬ್ ವಿವಾದವನ್ನು ರಾಜ್ಯದಾದ್ಯಂತ ಪಸರಿಸುವ ಪ್ರಯತ್ನ ನಡೆಸುತ್ತಿದ್ದು, ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುವ ಪ್ರಧಾನಿ ಮೋದಿ ಅವರ ಗಮನಕ್ಕೆ ಈ ವಿವಾದ ಬಂದಿಲ್ಲವೇ? ಎಂದು ಪ್ರಧಾನಿ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮುಲಕ ಚಾಟಿ ಬೀಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ಮತ್ತು ಸಂಘ ಪರಿವಾರ ಬಹಳ ವ್ಯವಸ್ಥಿತವಾಗಿ ಹಿಜಾಬ್ ವಿವಾದವನ್ನು ರಾಜ್ಯದಾದ್ಯಂತ ಪಸರಿಸುವ ಪ್ರಯತ್ನ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಇಂತಹ ಕೃತ್ಯಗಳನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೇ ಸಂಘ ಪರಿವಾರದ ನಿಜವಾದ ಅಜೆಂಡಾ, ಹಿಜಾಬ್ ಒಂದು ನೆಪ ಅಷ್ಟೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುವ ಪ್ರಧಾನಿ ಮೋದಿ ಅವರ ಗಮನಕ್ಕೆ ಈ ವಿವಾದ ಬಂದಿಲ್ಲವೇ? ಕುಂದಾಪುರದ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಗೇಟ್ ಹಾಕಿ ಪ್ರವೇಶ ನಿರಾಕರಿಸಿರುವುದು ಅಮಾನವೀಯ ಮಾತ್ರವಲ್ಲ ಸಂವಿಧಾನ ಬಾಹಿರವೂ ಹೌದು.ಕೂಡಲೇ ಕಾಲೇಜಿನ ಪ್ರಾಂಶುಪಾಲರನ್ನು ವಜಾಗೊಳಿಸಬೇಕು.

ತಮ್ಮ ಧರ್ಮಗಳಿಗೆ ಅನುಗುಣವಾಗಿ ವಸ್ತ್ರಧಾರಣೆ ಮಾಡುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಯಾವ ಕಾನೂನು ಕೂಡಾ ಇಲ್ಲ. ಹೀಗಿರುವಾಗ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಟ್ವೀಟ್ ಮಾಡಿದ್ದಾರೆ.